ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ಇಗ್ನಿಟೆಡ್ ಮೈಂಡ್ಸ್ ಪುಸ್ತಕದಲ್ಲಿ ಒಂದು ಅದ್ಭುತ ವೈಜ್ಞಾನಿಕ ಯೋಜನೆಯ ಘಟನೆಯನ್ನು ಸುಂದರವಾಗಿ ಹೀಗೆ ವಿವರಿಸಿದ್ದಾರೆ. 'ತಿರುವನಂತಪುರದ ಚರ್ಚ್ ಬಿಷಪ್ ಅವರ ಪ್ರಯತ್ನದ ಫಲವಾಗಿ THUMBA ಹಳ್ಳಿಯ ದನದ ಕೊಟ್ಟಿಗೆಗಳಲ್ಲಿ ಪ್ರಯೋಗಾಲಯ ಮತ್ತು ರಾಕೆಟ್ ತಯಾರಿಕೆಯ ಘಟಕಗಳನ್ನು ಸಂಗ್ರಹಿಸಿಸಲು ಒಪ್ಪಿಗೆ ಸಿಕ್ಕಿತು. ಉತ್ಸಾಹಿ ಯುವ ವಿಜ್ಞಾನಿಗಳ ಪಡೆಗೆ ಯಾವುದೇ ರೀತಿಯ ಗೊಂದಲ ಉಂಟಾಗಲಿಲ್ಲ. ಎಲ್ಲರೂ ಸೇರಿ ಪ್ರಥಮ ರಾಕೆಟ್ ಅನ್ನು ಜೋಡಿಸುವ ಕೆಲಸ ಪ್ರಾರಂಭವಾಯಿತು" ಈ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ತಂಡವನ್ನು ಡಾ. ಸಾರಾಭಾಯ್ ಅವರೇ ತುಂಬಾ ಜಾಗರೂಕತೆಯಿಂದ ಆಯ್ಕೆ ಮಾಡಿದ್ದರು. ರಾಕೆಟ್ ಜೋಡಣೆ ಮತ್ತು ಉಡಾವಣೆಯ ತರಬೇತಿ ಜೋರಾಗಿ ನಡೆದಿತ್ತು. ಹಿಂದೆ ರಾಕೆಟ್ ನ ಬಿಡಿಭಾಗಗಳು ಮತ್ತು ಪೆಲೋಡ್ ಗಳನ್ನು ಎತ್ತಿನಗಾಡಿ ಅಥವಾ ಸೈಕಲ್ ಮೇಲೆಯೇ ಉಡಾವಣಾ ಜಾಗದವರೆಗೆ ಕೊಂಡೊಯ್ಯಲಾಗುತ್ತಿತ್ತು. ಇಂಥಸಮಯದಲ್ಲಿ ಭಾರತ ತನ್ನ ಪ್ರಥಮ ರಾಕೆಟ್ ಉಡಾವಣೆಗೆ ವೇದಿಕೆ ಸಿದ್ಧಪಡಿಸಿತು. ಅಮೆರಿಕಾದ ನಾಸಾ ಸಂಸ್ಥೆಯು ಅಪಾಚೆ ರಾಕೆಟ್ ನೀಡಿತ್ತು. 6 ತಿಂಗಳ ನಿರಂತರ ಪರಿಶ್ರಮದ ನಂತರ, ಕೊನೆಗೆ 1963 ರ ನವೆಂಬರ್ 21 ರಂದು ಭಾರತ ಪ್ರಥಮ ರಾಕೆಟ್ ನ ಉಡಾವಣೆಗೆ ಸಜ್ಜಾಯಿತು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳೆಲ್ಲ ಅಂದು ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರ...