
ನಾಚಿಕೆ ಆಗಬೇಕು ರಾಜ್ಯ ಸರ್ಕಾರಕ್ಕೆ.....
ತೀರ ನಾಗರಿಕ ಸರ್ಕಾರಗಳು ಈ ಮಟ್ಟಿಗೆ ಲಜ್ಜೆಗೇಡಿತನಕ್ಕೆ ಇಳಿಯಬಾರದು. ಬೆಂಗಳೂರಿನ ದಾಹ ತಣಿಸಲು 300 ಕಿಮೀ ದೂರದ ಲಿಂಗನಮಕ್ಕಿ ಜಲಾಶಯದಿಂದ ನೀರು ಕೊಂಡೊಯ್ಯುವ ಬಗ್ಗೆ ಗಂಭೀರವಾಗಿ ಯೋಚನೆ ಯೋಜನೆ ಮಾಡಲು ಹಪ ಹಪಿತನ ತೋರುವ ರಾಜ್ಯದ ಸರ್ಕಾರ ಈ ನೆಲದಲ್ಲಿ ನಮ್ಮನ್ನ ಮುಳುಗಿಸಿ 60 ವರ್ಷ ಕಳೆದರೂ ನಾಗರಿಕ ಸಮಾಜದ ಅತಿಮುಖ್ಯ ಬೇಡಿಕೆಯಾದ ಸೇತುವೆ ಕೊಡದೇ, ಸಂತ್ರಸ್ತರು ಎಂಬ ಕಾರಣಕ್ಕೆ ವಿಶೇಷ ಅನುದಾನವನ್ನು ನೀಡದೆ, ಸಾಲದು ಎಂಬಂತೆ ನಾವು ನಿಂತಿರುವ ಜಾಗವನ್ನು ವನ್ಯಜೀವಿ, ಅಭಯಾರಣ್ಯ, ಇಂಡೀಕರಣ ಎಂದು ಒಕ್ಕಲೆಬ್ಬಿಸಲು ಯೋಜನೆ ರೂಪಿಸಿದ ಸರ್ಕಾರ ನಮ್ಮನ್ನು ಜೀವಂತ ಕೊಂದು ಆ ಸೂತಕದ ಮೇಲೆ ಬೆಂಗಳೂರಿಗೆ ನೀರು ಕೊಟ್ಟು ದೀಪಾವಳಿ ಆಚರಿಸಲು ಹೊರಟಿದೆ.
ನಾಡಿನ ಬೆಳಕಿಗೆ ಬದುಕು ಮತ್ತು ಬೇರು ಕಳೆದುಕೊಂಡ ಜನರನ್ನು ಕಳೆದ 6 ದಶಕದಲ್ಲಿ ನಿರಂತರ ನರ ಮುರಿದ ರಾಜ್ಯ ಸರ್ಕಾರ ಈಗ ಹೊಸ ಅಂಗಿ ಹಾಕಿ ನೀರಿನ ಧಾಹ ತೀರಲು ನೀವು ತ್ಯಾಗಿ ಆಗಿ ಎಂದು ಹೇಳಲು ಹೊರಟಿದೆ. ಅದಕ್ಕೂ ಮೊದಲು ಈ ಹಿಂದೆ ಮಾಡಿದ ನಮ್ಮವರ ತ್ಯಾಗಕ್ಕೆ ರಾಜ್ಯದ ನಾಗರಿಕ ಸರ್ಕಾರವೊಂದು ಏನು ಋಣ ಸಂದಾಯ ಮಾಡಿದೆ ಎಂದು ಹೇಳಲಿ...? ತುಮರಿ ಸೇತುವೆಗೆ ಹಣ ಕೊಡಿ ಎಂದು ಕೇಳಿದರೆ ವಿಧಾನಸೌಧದ 3 ನೆ ಮಹಡಿಯಲ್ಲಿ ಏನು ಲಾಭ ಅಷ್ಟು ಹಣ ನೀಡಲು ಎಂಬುವ ಚರ್ಚೆಯೇ ದ್ವನಿಸುತ್ತದೆ.. ಬ್ರಿಟಿಷ್ ಅವಧಿಯಲ್ಲಿ ಹಿರೇಭಾಸ್ಕರ್ ಮಡೆನೂರು ಅಣೆಕಟ್ಟು ಕಟ್ಟಿದರೂ ನಮ್ಮನ್ನು ಅವರು ನಡುಗಡ್ಡೆ ಆಗಲು ಬಿಡಲಿಲ್ಲ.. ಅಣೆಕಟ್ಟೆ ಮೇಲೆ ರಸ್ತೆ ಮಾಡಿ ಕೊಟ್ಟಿದ್ದರು...ಆದರೆ ನಮ್ಮದೇ ನಾಗರಿಕ ಸರ್ಕಾರ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿ ನಮ್ಮನ್ನು ಮತ್ತೆ ಮುಳುಗಿಸಿ ನಮ್ಮನ್ನು ದ್ವೀಪದ ಕೂಪದಲ್ಲಿ ತಳ್ಳಿತು. ನಮ್ಮ ಬಗ್ಗೆ ರಾಜ್ಯದ ಸರ್ಕಾರ ಕರಳು ಬಳ್ಳಿ ಪ್ರೇಮ ತೋರಲೇಬೇಕಿತ್ತು. ಆದರೆ ಶರಾವತಿ ನದಿ ದಂಡೆಯ ಮಕ್ಕಳ ಕಣ್ಣಿಗೆ ಸುಣ್ಣ ಹಾಕಿ ರಾಜಧಾನಿಗೆ ಬೆಣ್ಣೆ ಉಣಿಸುವ ಈ ಯೋಜನೆಗೆ ಸಂತ್ರಸ್ತ ದ್ವೀಪದಿಂದ ವಿರೋಧವಿದೆ... ನಾಡಿನ ಬೆಳಕಿಗೆ ಬದುಕು ಕಳೆದುಕೊಂಡು ತ್ಯಾಗ ಮಾಡಿದ ಜನರನ್ನು ತಾವು ನಡೆಸಿಕೊಂಡದ್ದು 6 ದಶಕದಲ್ಲಿ ನೋಡಿದ್ದೇವೆ.... ಸಾಕು ನಿಮ್ಮ ಔದಾರ್ಯ. ನೀರು ಕೊಡೆವು... ಶರಾವತಿ ನದಿಯ ನೀರು ಕೇಳುವ ನೈತಿಕತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇಲ್ಲ...ಇದನ್ನು ನಾನು ಹೇಳುತ್ತಾ ಇಲ್ಲ ಇತಿಹಾಸ ಹೇಳುತ್ತಾ ಇದೆ.
ಲಿಂಗನಮಕ್ಕಿ ನೀರು ಕುಡಿಯಲು... ವ್ಯವಸಾಯಕ್ಕೆ... ನಮಗೆ ಕೊಡಿ. ಮಲೆನಾಡಿನ ಕೆರೆಗಳು ಒಣಗಿವೆ ಮರುಪೂರಣ ಮಾಡಿ...ಲಿಂಗನಮಕ್ಕಿ ಜಲಾಶಯ ಹೂಳು ತುಂಬಿದೆ ಅದನ್ನು ತೆಗೆಸಿ....ಮುಂದಿನ ಮೂವತ್ತು ವರ್ಶದಲ್ಲಿ ಬೆಂಗಳೂರು ಎಷ್ಟು ಬೆಳೆಯುತ್ತದೆ ಎಂದು ಯೋಜನೆ ರೂಪಿಸುವ ಸರ್ಕಾರ ಅದೇ ಹೊತ್ತಿಗೆ ನನ್ನ ನೆಲವೂ ಬೆಳೆದಿರುತ್ತದೆ ಸರಿ ಹೊತ್ತಿನಲ್ಲಿ ಮಲೆನಾಡು ಬಯಲುಸೀಮೆ ಆಗಿ ಬದಲಾಗಿ ಮಳೆ ಪ್ರಮಾಣ ಕುಸಿಯುತ್ತದೆ ಎಂಬುದನ್ನೂ ಯೋಚಿಸಿ, ಯೋಜಿಸಿ. ಈ ನೆಲ ಕೇಂದ್ರೀಕೃತ ಯೋಜನೆ ರೂಪಿಸಿ...ಜಾರಿಗೆ ತನ್ನಿ.
ಶರಾವತಿ ನಮ್ಮದು... ನೀರು ನಮ್ಮದು...ಬನ್ನಿ ಒಟ್ಟಾಗಿ ನಮ್ಮ ದ್ವನಿ ಎತ್ತುವ....ಅಪ್ರಬುದ್ಧ ಸರ್ಕಾರದ ನಿಲುವನ್ನು ಮುಲಾಜಿಲ್ಲದೆ ಖಂಡಿಸುವ.
ಇಂಕ್ವಿಲಾಬ್ ಜಿಂದಾಬಾದ್....
ಜಿ.ಟಿ. ಸತ್ಯನಾರಾಯಣ. ಕರೂರು.
ಅಧ್ಯಕ್ಷ ರು. ಗ್ರಾಮ ಪಂಚಾಯಿತಿ. ತುಮರಿ.
Comments
Post a Comment