ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು.
ಗ್ರಾಮ ಪಂಚಾಯತಿಗಳನ್ನು ದೇಶದ ಕೊನೆಯ ಮತ್ತು ಅಭಿವೃದ್ಧಿಯ ಬುನಾದಿಯ ಕೇಂದ್ರ ಎಂದು ಕರೆಯಲಾಗುತ್ತದೆ.
ಕಳೆದ ೨೦೧೫ ರ ಜೂನ್ ೧೨ ರಂದು ನಡೆದ ಸುಮಾರು ೫೮೦೦ ಗ್ರಾಮ ಪಂಚಾಯಿತಿಗಳ ಅಧಿಕಾರವದಿ ಇದೆ ಬರುವ ಅಗಷ್ಟ್ ತಿಂಗಳಲ್ಲಿ ಕೊನೆಗೊಳ್ಳಲಿದೆ.
ಈ ಹೊತ್ತಿನಲ್ಲಿ ಕರ್ನಾಟಕ ಚುನಾವಣಾ ಆಯೋಗವು ಅಧಿಕಾರವದಿ ಮುಗಿದ ಪಂಚಾಯತ್ ಗಳಿಗೆ ಹೊಸದಾಗಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
ಕೊರೋನ ರೋಗ ವ್ಯಾಪಕವಾಗಿ ವೇಗವಾಗಿ ಹೆಚ್ಚುತ್ತಿರುವುದರಿಂದ ಅಯಾ ಜಿಲ್ಲೆಯ ಸಿಯಿಓ ಹಾಗು ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆಂದು ಚುನಾವಣಾ ಅಯೋಗ ಸ್ಪಷ್ಟನೆ ನೀಡಿದೆ, ಇದರ ಹೊರತಾಗಿಯು ಅನೇಕ ಪ್ರಶ್ನೆ ಅನುಮಾನಗಳು ಏಳುತ್ತವೆ ಮತ್ತು ನಾವು ಅವುಗಳನ್ನು ಒಂದೊಂದು ಹಂತವಾಗಿ ಹೇಳುತ್ತಾ ಹೋಗೋಣ.
ಇಲ್ಲಿ ಪ್ರಮುಖವಾಗಿ ಬರುವ ಪ್ರಶ್ನೆ
೧. ಅಧಿಕಾರಾವದಿ ಮುಗಿದ ಸದಸ್ಯರನ್ನು ಚುನಾವಣಾ ಆಯೋಗ ಮುಂದಿನ ಚುನಾವಣಾ ನಡೆಯುವ ತನಕ ಮುಂದುವರೆಸುತ್ತದೆಯೆ?
೨. ಚುನಾವಣಾ ಆಯೋಗ ಸರ್ಕಾರದ ಒತ್ತಡಕ್ಕೆ ಮಣಿಯಿತೆ?
೩. ನಾಮ ನಿರ್ದೇಶನ ಮಾಡುವುದಾದರೆ ಯಾವ ಆಧಾರದ ಮೇಲೆ ಮಾಡುತ್ತಾರೆ?
೪. ಕಾಂಗ್ರೆಸ್ ಆಯೋಗಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಉದ್ದೇಶ ಏನಿರಬಹುದು?
೫.ಚುನಾವಣಾ ಅಯೋಗದ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಏನಾಗಬಹುದು?
ಇನ್ನೂ ಹತ್ತು ಹಲವಾರು ಪ್ರಶ್ನೆಗಳು ತಲೆಯಲ್ಲಿ ಸುಳಿಯುತ್ತವೆ.
ಕರ್ನಾಟಕದ ಪಂಚಾಯತ್ ರಾಜ್ ಕಾಯ್ದೆ ದೇಶಕ್ಕೆ ಮಾದರಿಯಾದಂತಹದ್ದು ಅದನ್ನು ಬೇರೆ ರಾಜ್ಯಗಳು ಸಹ ಕೆಲ ಹಲ ಮಾರ್ಪಡಿನೊಂದಿಗೆ ಅಳವಡಿಸಿಕೊಂಡಿವೆ ಇದಕ್ಕಾಗಿ ಶ್ರಮಿಸಿದವರಲ್ಲಿ ಸರ್ ಅಬ್ದುಲ್ ನಜೀರ್ ಅವರು ಪ್ರಮುಖರು.
ಇಂದಿಗೂ ಪಂಚಾಯತ್ ಅಂದರೆ ನಜೀರ್ ಸಾಬ್ ರವರು ನೆನಪಿಗೆ ಬರುತ್ತಾರೆ.
ಚುನಾವಣಾ ಆಯೋಗ ಒಂದು ಸ್ವತಂತ್ರ ಇಲಾಖೆ ದೇಶದ ಪ್ರಜಾತಂತ್ರದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಈ ಇಲಾಖೆಯಲ್ಲಿ ಯಾವ ಪಕ್ಷವೂ ಹಸ್ತಕ್ಷೇಪ ಮಾಡುವಂತಿಲ್ಲ ಆದರೇ ಕಳೆದ ಆರೇಳು ವರ್ಷಗಳಿಂದ ಅದರ ಕಾರ್ಯನಿಷ್ಠೆಯ ಬಗ್ಗೆ ಅಪಸ್ವರಗಳು
ಕೇಳಿ ಬರುತ್ತಲೆ ಇದೆ, ಈಗ ಅದರ ಬಗ್ಗೆ ಹೆಚ್ಚಿನ ಚರ್ಚೆ ಮಾಡದೆ ಮುಖ್ಯ ವಿಷಯಕ್ಕೆ ಬರುತ್ತೇನೆ.
ಕೊರೋನ ಒಂದು ಹಂತಕ್ಕೆ ಬಂದು ಇನ್ನು ಅದರ ಅಪಾಯವಿಲ್ಲ ಅನ್ನವ ತನಕ ಪಂಚಾಯತ್ ಚುನಾವಣೆ ಮಾಡುವುದಿಲ್ಲ ವೆಂದು ಆಯೋಗ ಹೇಳಿರುವುದರಿಂದ ಹಾಲಿ ಇರುವ ಸದಸ್ಯರನ್ನು ಅಯೋಗ ಮುಂದುವರಿಸುತ್ತದೆಯೊ ಅಥವಾ ವಿಸರ್ಜನೆ ಮಾಡಿ ಉಸ್ತುವಾರಿಯನ್ನು ಅಯಾ ತಾಲೂಕಿನ ಶಾಸಕರು ಹಾಗು ತಾಲೂಕಿನ ಆಧಿಕಾರಿಗಳಿಗೆ ನೋಡಿಕೊಳ್ಳಲು ಹೇಳುತ್ತದೆಯೊ ಎಂಬುದಕ್ಕೆ ಚುನಾವಣಾ ಅಯೋಗ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.
ಅದಲ್ಲದೇ ಹಾಲಿ ಇರುವ ಸದಸ್ಯರ ಅಧಿಕಾರವದಿ ಐದು ವರ್ಷಗಳ ತನಕ ಮಾತ್ರವೆ ಆಗಿರುವುದರಿಂದ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಅವರನ್ನೇ ಮುಂದುವರಿಸಲು ಹಲವು ತೊಡಕುಗಳು ಎದುರಾಗುತ್ತವೆ.
ಇನ್ನೂ ಪಂಚಾಯತ್ ಹಾಗು ಗ್ರಾಮಾಭಿವೃದ್ದಿ ಇಲಾಖೆಯ ಸಚಿವರಾದ ಈಶ್ವರಪ್ಪನವರು ನಾಮ ನಿರ್ದೇಶನದ ಬಗ್ಗೆ ಮಾತಾಡಿದ್ದಾಗಿ ತಿಳಿದು ಬಂದಿದೆ ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಅರ್ಥವಾಗುವುದೆನೆಂದರೆ ಇದು ಪ್ರಜಾಪ್ರಭುತ್ವದ ಕೊಲೆಯಲ್ಲದೆ ಇನ್ನೇನು ಅಲ್ಲ.
ಒಬ್ಬ ಪಕ್ಷದ ಶಾಸಕ ಪಂಚಾಯತ್ ಗಳಿಗೆ ಯಾವ ಆಧಾರದ ಮೇಲೆ ನಾಮ ನಿರ್ದೇಶನ ಮಾಡುತ್ತಾನೆಂದು ಕಣ್ಣು ಮುಚ್ಚಿಕೊಂಡು ಹೇಳಬಹುದು, ತಮ್ಮ ಪಕ್ಷದ, ತಾವು ಹೇಳಿದಂತೆ ಕೇಳುವ, ತಮಗೆ ಪ್ರಿಯವಾದ ಜನರನ್ನು ಆರಿಸಿ ಸದಸ್ಯರನ್ನಾಗಿ ಮಾಡುವುದರಲ್ಲಿ ಸಂದೇಹವೇ ಇಲ್ಲ, ಇದು ಇಷ್ಟೇ ಅಲ್ಲದೆ ಒಬ್ಬ ಶಾಸಕನಿಗೆ ಬ್ಲಾಕ್ ಮೇಲೆ ಮಾಡುವ ಎಲ್ಲ ಹಕ್ಕುಗಳನ್ನು ನೀಡಿದಂತಾಗುತ್ತದೆ.
ಉದಾ "ನೀನು ನಮ್ಮ ಪಕ್ಷಕ್ಕೆ ಬಂದರೆ ಇಂತಿಷ್ಟು ದುಡ್ಡು ಕೊಟ್ಟರೆ ನಿನ್ನನ್ನು ಸದಸ್ಯನಾಗಿ ಮಾಡುತ್ತೇನೆ ಎಂದು"
ಈಗ ಉದಾಹರಣೆಗೆ ತುಮರಿ ಗ್ರಾ.ಪಂ ಅಡಳಿತ ಪಕ್ಷ ಪರೋಕ್ಷವಾಗಿ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದೆ ಮತ್ತು ಅತ್ಯಂತ ಯಶಸ್ವಿಯಾಗಿ ಆಡಳಿತವನ್ನು ನಡೆಸಿಕೊಂಡು ಹೋಗಿದೆ ಮತ್ತು ಜನರ ಬಾಯಲ್ಲಿ ಶಹಬ್ಬಾಸ್ ಅನ್ನಿಕೊಂಡಿದೆ. ಹೀಗಿರುವಾಗ ಸಾಗರದ ಶಾಸಕರು ಬಿಜೆಪಿ ಪಕ್ಷದವರು ಅವರು ನಿರ್ದೇಶನ ಮಾಡುವುದಾದರೆ ಪಕ್ಷಾತೀತವಾಗಿ ಆಲೋಚನೆ ಮಾಡುತ್ತಾರೆಯೆ?
ಕಳೆದಸಾರಿ ಪಂಚಾಯತಿ ಬಾಗಿಲಿಗೆ ಬೀಗ ಹಾಕಿಸುವಂತಹ ಬೇಜವಬ್ದಾರಿ ಕೆಲಸ ಮಾಡಿದ್ದ ಅವರ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡಿದರೆ ತುಮರಿ ಜನರ ಸಮಸ್ಯೆಗಳನ್ನು ಕೇಳಲು ಶಾಸಕರು ಅಥವಾ ಅಯೋಗ ಬರುತ್ತದೆಯೇ? ಹಾಗೇನಾದರು ಪಕ್ಷದ ಶಾಸಕರು ಮಾಡಿದ್ದಲ್ಲಿ ಜನತೆಗೆ ಅವರೆ ಮೋಸ ಮಾಡಿದಂತಾಗುತ್ತದೆಯಷ್ಟೇ.
ಹೀಗೆ ಮಾಡಿದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತದೆ.
ಒಂದು ದಿನದ ಹೆಂಡಕ್ಕೆ ನೂರು ರುಪಾಯಿ ನೋಟಿಗೆ ಓಟು ಹಾಕಿ ಐದು ವರ್ಷ ವಿಪರೀತ ಅನುಭವಿಸಿದವರಿದ್ದಾರೆ.
ಅಂತಹ ಹೊತ್ತಲ್ಲಿ ಶಾಸಕರಿಗೆ ಇಷ್ಟ ಬಂದವರೆಲ್ಲ ಸದಸ್ಯರಾಗುವುದಾದರೆ
ಜನರ ಅಭಿಪ್ರಾಯ ಕೇಳುವರ್ಯಾರು? ಚುನಾವಣಾ ಆಯೋಗಕ್ಕೂ ಕೂಡ ನೇರವಾಗಿ ನಿರ್ದೇಶನ ಮಾಡುವಂತಹ ಯಾವುದೇ ಅಧಿಕಾರವಿಲ್ಲ ಹಾಗಿದ್ದಲಿ ಒಬ್ಬ ಶಾಸಕನಿಗೆ ಈ ಅಧಿಕಾರ ನೀಡುವುದು ಸರಿಯಲ್ಲ.
ಜನ ಮನ ಗೆಲ್ಲುವವನೆ ನಿಜವಾದ ನಾಯಕನಾಗಬೇಕು ಹೊರತು ಶಾಸಕರ ಮನ ಗೆದ್ದವನಲ್ಲ.
ಇನ್ನು ಕರ್ನಾಟಕ ಚುನಾವಣಾ ಅಯೋಗ ಕರ್ನಾಟಕ ಸರ್ಕಾರದ ಒತ್ತಡಕ್ಕೆ ಒಳಗಾಯಿತೆ ಎಂಬ ಬಲವಾದ ಅನುಮಾನಗಳು ಸಹ ಏಳುತ್ತವೆ.
ಯಾಕೆಂದರೆ ಅಯೋಗವಿನ್ನೂ ಬದಲಿ ಮಾರ್ಗಗಳನ್ನು ನಿರ್ದಾರ ಮಾಡಿಲ್ಲದೆ ಅಸ್ಪಷ್ಟವಾಗಿ ತನ್ನ ನಿಲುವನ್ನು ತೋರಿಸಿದೆ ಇದರೊಂದಿಗೆ ಹಲವಾರು ಪ್ರಶ್ನೆ ಮತ್ತು ಅನುಮಾನಗಳಗೆ ಎಡೆಮಾಡಿಕೊಟ್ಟಿದೆ. ಚುನಾವಣಾ ಆಯೋಗ ಹೀಗೆ ಮಾಡಬಹುದೆಂಬ ಅನುಮಾನಗಳ ಮೇಲೆಯೆ ಕಾಂಗ್ರೆಸ್ ಅಂದು ಇದರ ಬಗ್ಗೆ ಅರ್ಜಿ ನೀಡಿ ಮನವಿ ಸಲ್ಲಿಸಿತ್ತು, ಆದರೆ ಆಯೋಗದ ಈ ನಿರ್ಧಾರ ಜನತೆಯಲ್ಲು ಸಹ ಅಚ್ಚರಿ ಮೂಡಿಸಿದೆ. ಕರ್ನಾಟಕ
ಕಾಂಗ್ರೆಸ್ ಆಯೋಗದ ಈ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿಕೊಂಡಿದೆ.
ಈ ಬಗ್ಗೆ ಜನರು ಕೂಡ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಲು ತೀರ್ಮಾನ ಮಾಡಿದ್ದಾರೆ ಹಾಗೆನಾದರು ಆದಲ್ಲಿ ಚೆಂಡು ನ್ಯಾಯಲಯದ ಅಂಗಳದಲ್ಲಿ ಉಳಿಯುತ್ತದೆ ಮತ್ತು ಅಲ್ಲಿನ ತೀರ್ಮಾನವೆ ಅಂತಿಮವಾಗುತ್ತವೆ.
ಅದೇನೆ ಇರಲಿ ಮಳೆಗಾಲದ ಪ್ರಾರಂಭವಾಗಿದೆ ಎಷ್ಟೋ ಜನರು ಹೊಸ ಮನೆಯ ಕನಸಿನಿಂದ ಹಳೆ ಮನೆಗಳನ್ನು ಕೆಡವಿ ಆರ್ಧಕ್ಕೆ ನಿಂತ ಕೆಲಸಗಳಿಂದ ದಿಕ್ಕು ತೋಚದಂತಾಗಿದ್ದಾರೆ, ಸರಿಯಾಗಿ ಹಣ ಬೇರೆ ಬಿಡುಗಡೆಯಾಗುತ್ತಿಲ್ಲ ಸ್ವಂತವಾಗಿ ಮಾಡಿಸಿಕೊಳ್ಳಲು ಹಣವೂ ಇಲ್ಲ. ಒಟ್ಟಿನಲ್ಲಿ ಅಯೋಗ ಹಾಗು ಸರ್ಕಾರದ ಅಸ್ಪಷ್ಟ ನಿರ್ಧಾರಗಳಿಂದ ಜನ ನಲುಗುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ
ಸರ್ಕಾರ ಈ ಕೂಡಲೆ ಜನರಿಗೆ ಸ್ಪಂದಿಸಿ ಅಗತ್ಯ ನೆರವುಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.
-- ಶಶಿಕಾಂತ್ ಎಮ್ ಎಸ್ ನಾಯಕ್
(ನಕ್ಷತ್ರಾಕ್ಷ)

Comments
Post a Comment