" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ " ಪ್ರತಿಮೆಗಳ ಎತ್ತರದ ಮುಖಾಂತರವೇ ಆ ವ್ಯಕ್ತಿಗಳ ವ್ಯಕ್ತಿತ್ವವನ್ನು ಅಳೆಯುವ ಹೊಸ ಟ್ರೆಂಡ್ ನ ಕಾಲಘಟ್ಟದತ್ತ ನಾವು ಸಾಗುತ್ತಿದ್ದೇವೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ............ ಸಿನಿಮಾಗಳಿಗೆ ಖರ್ಚು ಮಾಡುವ ಬಜೆಟ್ ನಿಂದ ಅದರ ಗುಣಮಟ್ಟವನ್ನು, ಕಟೌಟ್ ಎತ್ತರದ ಆಧಾರದಲ್ಲಿ ನಾಯಕ ನಟನ ಅಭಿನಯ ಮತ್ತು ಜನಪ್ರಿಯತೆಯನ್ನು, ಅಳೆಯುವಂತೆ ಇದು ಕೂಡ ಆಗುತ್ತಿದೆಯೇ ............ ಈ ಪ್ರತಿಮಾ ಸಂಸ್ಕೃತಿ ಬಹಳ ಹಿಂದಿನಿಂದಲೂ ಇದೆ. ಅಭಿಮಾನಿಗಳ ಆರಾಧಕರ ಭಕ್ತರ ಅನುಯಾಯಿಗಳ ಒಗ್ಗೂಡುವಿಕೆಯ ನೆಪದಲ್ಲಿ ಅವರ ಪ್ರೀತಿ ಪಾತ್ರರ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ಕ್ಷೇತ್ರಗಳ ಸಾಧಕರು ಮತ್ತು ಜನಪ್ರಿಯರು ಇದರಲ್ಲಿ ಸೇರಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಮೂರ್ತಿ ಸ್ಥಾಪನೆಯ ನಂತರ ಅದಕ್ಕಿಂತ ಎತ್ತರಕ್ಕೆ ಮತ್ತೊಬ್ಬರ ಪ್ರತಿಮೆ ಸ್ಥಾಪಿಸುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ, ಕರ್ನಾಟಕದಲ್ಲಿ ಕಾವೇರಿ ಪ್ರತಿಮೆ, ಇನ್ನೆಲ್ಲೋ ಶಿವನ ಪ್ರತಿಮೆ ಹೀಗೆ ಸಾಗುತ್ತಿರುವ ಈ ಟ್ರೆಂಡ್ ಮುಂದೆ ಪ್ರತಿ ರಾಜ್ಯ ಜಿಲ್ಲೆಗಳಲ್ಲೂ ಎತ್ತರದ ನಿರ್ಜೀವ ಪ್ರತಿಮೆಗಳ ನಿರ್ಮಾಣದ ಕಾರ್ಯದತ್ತ ಸಾಗಬಹುದೆ. ಮಸೀದಿ ಚರ್ಚು ಮಂದಿರಗಳ ಸಂಖ್ಯೆ ಹೆಚ್ಚಾದಷ್ಟು ಅದರ ಶ್ರೇಷ್ಠತೆಯ ...